ಆಗ್ನೇಯ ಏಷ್ಯದ ಒಂದು ದೇಶ. ಇಂಡೋ ಚೀನ ಪರ್ಯಾಯ ದ್ವೀಪದಲ್ಲಿ ಸಯಾಮಿನ ಪಕ್ಕದಲ್ಲಿದೆ. ಅನ್ನಾಂ ಪರ್ವತ ಪ್ರದೇಶದ ಪಶ್ಚಿಮ ಭಾಗದಲ್ಲಿದೆ. ಉತ್ತರದಲ್ಲಿ ಚೀನ, ಈಶಾನ್ಯ ಮತ್ತು ಪೂರ್ವದಲ್ಲಿ ವಿಯೆಟ್ನಾಮ್, ದಕ್ಷಿಣದಲ್ಲಿ ಕಂಪೂಚಿಯ, ಪಶ್ಚಿಮದಲ್ಲಿ ಥಾಯ್ಲೆಂಡ್ ಮತ್ತು ವಾಯವ್ಯದಲ್ಲಿ ಮಯನ್ಮಾರ್ ದೇಶಗಳು ಸುತ್ತುವರಿದಿವೆ. ಇದೊಂದು ಭೂವೇಷ್ಟಿತ ದೇಶ. ವಿಸ್ತೀರ್ಣ 2,36,800 ಚ.ಕಿಮೀ (91,400 ಚ.ಮೈ.)  ಜನಸಂಖ್ಯೆ 55 ಲಕ್ಷ. ಭಾಷೆ: ಲಾವೊ, ಬುಡಕಟ್ಟು ಭಾಷೆ, ಇಂಗ್ಲಿಷ್, ಫ್ರೆಂಚ್. ಸಾಕ್ಷರತೆ: 57%. ಧರ್ಮ: ಬೌದ್ಧ ಮತ್ತು ಬುಡಕಟ್ಟಿನ ಪದ್ಧತಿ ನಂಬಿಕೆಗಳು. ನಾಣ್ಯ: ಕಿಪ್

	ಇತಿಹಾಸ: 1893ರಲ್ಲಿ ಇದು ಫ್ರೆಂಚರ ವಶಕ್ಕೆ ಬಂತು. ಎರಡನೆಯ ಮಹಾಯುದ್ಧದಲ್ಲಿ ಜಪಾನಿಯರ ದಾಳಿಗೆ ಒಳಗಾಯಿತು. 1946ರಲ್ಲಿ ಲಾವೋಸ್ ಲುವಾಂಗ್ ಪ್ರಭಾಂಗ್ ರಾಜಮನೆತನದ ಆಳಿಕೆಯಲ್ಲಿ ಫ್ರೆಂಚರ ಆಶ್ರಿತ ರಾಜ್ಯವಾಗಿತ್ತು. 1954ರಲ್ಲಿ ಲಾವೋಸ್ ಸ್ವತಂತ್ರವಾಯಿತು. 1960-70ರ ದಶಕದ ಅಮೆರಿಕ-ವಿಯೆಟ್ನಾಮ್ ನಡುವಣ ಸಮರದ ಬಿಸಿ ಲಾವೋಸ್‍ಗೂ ತಟ್ಟಿತು. ಆಡಳಿತದಲ್ಲಿ ಕಮ್ಯುನಿಸ್ಟ್ ಮತ್ತು ಸಂಪ್ರದಾಯವಾದಿಗಳ ನಡುವೆ ನಿರಂತರವಾದ ಸಂಘರ್ಷಣೆ ನಡೆಯಿತು. 1975ರಲ್ಲಿ ಕಮ್ಯುನಿಸ್ಟ್ ಪಕ್ಷದ (ಪಥೆಟ್ ಲಾವೋ) ನೇತೃತ್ವದ “ಲಾವೋಸ್ ಹೊಸ ಗಣರಾಜ್ಯ” ಅಸ್ತಿತ್ವಕ್ಕೆ ಬಂತು.

	ಲಾವೋಸ್‍ನ ಸಂವಿಧಾನ ಜಾರಿಗೆ ಬಂದದ್ದು 1991ರಲ್ಲಿ. ರಾಷ್ಟ್ರಾಧ್ಯಕ್ಷ ಸರ್ಕಾರದ ಮುಖ್ಯಸ್ಥ. ಆತ ಪ್ರಧಾನಮಂತ್ರಿ  ಮತ್ತು ಸಚಿವ ಸಂಪುಟವನ್ನು ನೇಮಿಸುವನು. ಲಾವೋಸ್ ರಾಜಧಾನಿ ವಿಯೆಂಟಿಯೇನ್. ದೇಶದಲ್ಲಿ 16 ಪ್ರಾಂತ್ಯಗಳಿವೆ. ಪ್ರತಿಪ್ರಾಂತ್ಯವನ್ನು ಜಿಲ್ಲೆ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿದೆ.
ಮೇಲ್ಮೈಲಕ್ಷಣ : ಲಾವೋಸ್‍ನ ಹೆಚ್ಚಿನ ಭಾಗ ಪರ್ವತಗಳಿಂದಾ ವೃತವಾದ್ದು. ಮೌಂಟ್ ಲಿಯಾವು ಲಾವೋಸ್‍ನಲ್ಲೆ ಎತ್ತರವಾದ (2,818 ಮೀ) ಶಿಖರ. ಉತ್ತರದ ಜಿಯಾಂಗ್ ಹಾಂಗ್-ಜಾರ್ಸ್ ಮೈದಾನ, ಮಧ್ಯದ ಬೊಲಿಕ್ ಹಾಂಕ್ಸಿ-ಖಮ್ಮೌನ್ ಮತ್ತು ದಕ್ಷಿಣದಲ್ಲಿ ಬೊಲೊಲೆನ್ಸ್ ಪ್ರಸ್ಥಭೂಮಿಗಳು ಲಾವೋಸ್‍ನ ಮುಖ್ಯ ಭೂಸ್ವರೂಪಗಳು. ಮೇಕಾಂಗ್ ನದಿಯ ಪೂರ್ವ ಭಾಗ ಲಾವೋಸಿನ ಏಕೈಕ ಮೈದಾನ. ಮೇಕಾಂಗ್ ಮತ್ತು ಅದರ ಉಪನದಿ ಗಳದು ಲಾವೋಸ್‍ನ ಮುಖ್ಯ ನದಿ ವ್ಯವಸ್ಥೆ. ಮೇಕಾಂಗ್ ಆಗ್ನೇಯಕ್ಕೆ 4,023 ಕಿಮೀ ದೂರ ಹರಿದು ಟೊಂದಿನ್ ಖಾರಿ ಸೇರುತ್ತದೆ.

	ಮಣ್ಣು : ನದಿ ಬಯಲು ಮೆಕ್ಕಲು ಮಣ್ಣಿನಿಂದ ಕೂಡಿದೆ. ಅದರು ಮರಳು ಮಿಶ್ರಿತವಾಗಿ ಬೂದು ಮತ್ತು ತೆಳು ಹಳದಿ ಬಣ್ಣದಿಂದ ಕೂಡಿರುತ್ತದೆ. ಪರ್ವತ ಭಾಗಗಳಲ್ಲಿ ಆಮ್ಲೀಯ ವಸ್ತುಗಳನ್ನುಳ್ಳ ಫಲವತ್ತಲ್ಲದ ಮಣ್ಣಿದೆ. ದೇಶದ ದಕ್ಷಿಣ ಹಾಗೂ ಬೊಲೊವೆನ್ಸ್ ಪ್ರಸ್ಥಭೂಮಿಯ ಭಾಗಗಳಲ್ಲಿ ಜಂಬಿಟ್ಟಿಗೆ ಮಣ್ಣಿದೆ.
ವಾಯುಗುಣ : ಇಲ್ಲಿಯ ಉಷ್ಣವಲ ಯದ ಮಾನ್ಸೂನ್ ವಾಯುಗುಣ. ಮೇ-ಅಕ್ಟೋಬರ್ ಮಳೆಗಾಲ. ಈ ಕಾಲದ ಸರಾಸರಿ ಉಷ್ಣಾಂಶ 270 ಸೆ. (800 ಫ್ಯಾ). ನೈಋತ್ಯ ಮಾನ್ಸೂನ್ ಮಾರುತ ಮಳೆ, 1,300 ರಿಂದ 2.300 ಮಿಮೀ (50-90”). ನವೆಂಬರ್-ಏಪ್ರಲ್ ಭೆಸಗೆ. ಸರಾಸರಿ ಉಷ್ಣಾಂಶ 210 ಸೆ. ಈಶಾನ್ಯ ಮಾನ್ಸೂನ್ ಮಾರುತಗಳು ಪ್ರಧಾನ. ಡಿಸೆಂಬರ್‍ನ ಕನಿಷ್ಠ ಉಷ್ಣಾಂಶ 160 ಸೆ. ತಂಪಾದ ಪರಿಸ್ಥಿತಿ ಇರುತ್ತದೆ.

	ಸಸ್ಯ ಪ್ರಾಣಿವರ್ಗ : ದೇಶದ ಉತ್ತರ ಭಾಗದಲ್ಲಿ ಉಷ್ಣವಲಯದ ಮಳೆಯನ್ನಾಧರಿಸಿದ, ಅಗಲ ಎಲೆಗಳ ಹಸಿರು ಕಾಡುಗಳೂ, ದಕ್ಷಿಣದಲ್ಲಿ ಮಾನ್ಸೂನ್-ಎಲೆ ಉದುರುವ ಮಿಶ್ರ ಕಾಡುಗಳೂ ಇವೆ. ಮಾನ್ಸೂನ್ ಕಾಡುಗಳಲ್ಲಿ ಒರಟು ಹುಲ್ಲು ಬೆಳೆಯುತ್ತದೆ. ಮರಗಳು ಕಡಿಮೆ. ಬಿದಿರು ಹೆಚ್ಚು. ಜೊತೆಗೆ ಕುರುಚಲು ಸಸ್ಯ ಮತ್ತು ಕಾಡುಬಾಳೆ ಗಿಡಗಳು ಕಂಡುಬರುತ್ತವೆ.

ದಟ್ಟವಾದ ಕಾಡುಗಳು ವನ್ಯಪ್ರಾಣಿ ಗಳಿಗೆ ಆಶ್ರಯವಾಗಿವೆ. ಲಾವೋಸ್ ‘ಆನೆಗಳ ನಾಡು’ ಎಂದೇ ಪ್ರಸಿದ್ಧವಾಗಿತ್ತು. ಈಗಲೂ ಮರದ ದಿಮ್ಮಿ ಸಾಗಿಸಲು ಆನೆಗಳನ್ನು ಬಳಸುತ್ತಾರೆ. ಜಿಂಕೆ, ಕರಡಿ, ಚಿರತೆ, ಹುಲಿ ಮತ್ತು ವಿವಿಧ ಪಕ್ಷಿಗಳು ಇವೆ. ವರ್ಗಾವಣೆ ಬೇಸಾಯದಿಂದ ಅರಣ್ಯ ನಾಶವಾಗಿ ಮಣ್ಣಿನ ಸವೆತ ಉಂಟಾಗಿ ನದಿಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ.  ಇದನ್ನು ನಿಯಂತ್ರಿಸಿ ತೇಗ ಬೆಳೆಯಲು ಸರ್ಕಾರ ಕ್ರಮ ಕೈಗೊಂಡಿದೆ.

	ಜನಸಂಖ್ಯೆ : ಸುಮಾರು 55 ಲಕ್ಷ ಜನ ಇದ್ದಾರೆ. ಜನಸಾಂದ್ರತೆ ಕಡಿಮೆ. ಶಿಶುಮರಣ ದರ ಹೆಚ್ಚು. ಜನಸಂಖ್ಯಾ ಬೆಳವಣಿಗೆ ಕಡಿಮೆ. ಗ್ರಾಮಗಳಲ್ಲಿ ಹೆಚ್ಚು ಜನ ವಾಸಿಸುತ್ತಾರೆ. ಕೃಷಿ ನಡೆಯುವಲ್ಲಿ ಹಳ್ಳಿಗಳಿವೆ. ಗುಡ್ಡಗಾಡುಗಳಲ್ಲಿ ಬುಡಕಟ್ಟು ವಸತಿಗಳಿವೆ. ಅವರ ವೃತ್ತಿ ಬೇಟೆ, ಆಹಾರ ಪದಾರ್ಥ ಸಂಗ್ರಹ ಮತ್ತು ವರ್ಗಾವಣೆ ಬೇಸಾಯ. ಜನಸಂಖ್ಯೆಯಲ್ಲಿ ಸೇ.85 ಭಾಗ ಬೌದ್ಧರು. ಕೆಲವರು ಕನ್‍ಫೂಷಿಯಸನರು ಮತ್ತು ಕ್ರೈಸ್ತರು.

ಆರ್ಥಿಕತೆ : ಲಾವೋಸ್ ಆರ್ಥಿಕವಾಗಿ ಹಿಂದುಳಿದಿದೆ. ಸ್ವಾತಂತ್ರ್ಯಾ ನಂತರ ಸುಧಾರಣಾ ಕ್ರಮ ಕೈಗೊಂಡಿದ್ದು, ವಿದೇಶೀ ಕಂಪನಿಗಳು ಬಂಡವಾಳ ಹೂಡಲು ಅನುವು ಮಾಡಿಕೊಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗಿದೆ.

	ಲಾವೋಸ್‍ನಲ್ಲಿ ಕಬ್ಬಿಣದ ಅದಿರು, ಕಲ್ಲಿದ್ದಲು, ತಾಮ್ರ, ಸೀಸ, ತವರ, ಚಿನ್ನ, ಜಿಪ್ಸಂ ಇತ್ಯಾದಿ ಖನಿಜಗಳು ದೊರೆಯುತ್ತವೆ. ಆದರೆ ಉತ್ಪಾದನೆ ಸುಧಾರಿಸಿಲ್ಲ. ದೇಶದಲ್ಲಿ ಅಪಾರ ಜಲಶಕ್ತಿ ಸಂಪತ್ತಿದೆ.

	ಜನರ ಪ್ರಮುಖ ವೃತ್ತಿ ಬೇಸಾಯ. ವರ್ಗಾವಣೆ ಬೇಸಾಯ ಈಗಲೂ ರೂಢಿಯಲ್ಲಿದೆ. ಬತ್ತ, ಕಬ್ಬು, ಹೊಗೆಸೊಪ್ಪು, ಕಾಫಿ ಪ್ರಮುಖ ಬೆಳೆಗಳು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಆಗಾಗ್ಗೆ ಬೆಳೆಗಳು ಹಾನಿಗೊಳಗಾಗುತ್ತವೆ. 

ಯಾವುದೇ ಕೈಗಾರಿಕೆಯೂ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಹೊಂದಿಲ್ಲ. ಪ್ರಮುಖ ಉದ್ಯಮಗಳೆಂದರೆ; ಅಕ್ಕಿ ಗಿರಣಿ, ಮರ ಕೊಯ್ಯುವುದು, ಪಾನೀಯಗಳ ಸಂಸ್ಕರಣೆ, ಕಟ್ಟಡ ನಿರ್ಮಾಣ ವಸ್ತುಗಳ ತಯಾರಿಕೆ.

	ಲಾವೋಸ್‍ನಲ್ಲಿ ಅಷ್ಟೇನೂ ಸಾರಿಗೆ-ಸಂಪರ್ಕ ಅಭಿವೃದ್ಧಿಯಾಗಿಲ್ಲ. ಇದಕ್ಕೆ ದೇಶದ ಆರ್ಥಿಕ ಹಿನ್ನಡೆ ಮುಖ್ಯ ಕಾರಣ. ರಸ್ತೆ, ಒಳನಾಡಿನ ಜಲಸಂಚಾರ ಮತ್ತು ವಾಯುಸಾರಿಗೆ ಸೌಲಭ್ಯವಿದೆ. ಸರಕು ಸಾಗಣೆ ಮತ್ತು ವ್ಯಾಪಾರ ಸಂಬಂಧ ಹೆಚ್ಚಾಗಿ ನದಿಗಳ ಮೂಲಕ. ರೈಲು ಸಾರಿಗೆಯಿಲ್ಲ. ರಾಜಧಾನಿ ವಿಯೆಂಟಿಯೆನ್‍ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ಲಾವೋಸ್‍ನಲ್ಲಿ ಸಾಕ್ಷರತೆ ಹಾಗೂ ಶಿಕ್ಷಣ ಮಟ್ಟ ಕಡಿಮೆ. ವೈದ್ಯ ಸೌಲಭ್ಯ ಪಟ್ಟಣಗಳಿಗೆ ಸೀಮಿತ. ಜನರ ಸರಾಸರಿ ನಿರೀಕ್ಷಿತ ವಯಸ್ಸು ಕಡಿಮೆ. ಕೆಲವು ಸಾಂಕ್ರಾಮಿಕ ರೋಗಗಳು ಈಗಲೂ ತೀವ್ರವಾಗಿವೆ. ಗಿಡಮೂಲಿಕೆ ನಾಟಿ ವೈದ್ಯ ಚಿಕಿತ್ಸೆ ಸಾಮಾನ್ಯ.

	ಲಾವೋಸ್ ಜನರ ಕಲೆ, ಸಂಸ್ಕøತಿ, ಸಾಹಿತ್ಯ, ಸಂಗೀತ, ನಾಟಕ ಮುಂತಾದವು ಸಂಪೂರ್ಣವಾಗಿ ಧಾರ್ಮಿಕ ಮತ್ತು ಸಂಪ್ರದಾಯದ ನೆಲೆಗಟ್ಟಿನಲ್ಲಿ ಮುಂದುವರಿದಿವೆ. ಬೌದ್ಧ-ಹಿಂದು ಧರ್ಮಗಳನ್ನಾಧರಿಸಿದ ಶಿಲ್ಪಕಲೆಗಳು ಧಾರ್ಮಿಕ ಸ್ಥಳಗಳಲ್ಲಿ ಸ್ವಲ್ಪ ಉಳಿದಿವೆ. ಇವುಗಳ ಮೇಲೆ ಥಾಯ್ಲೆಂಡ್ ಮತ್ತು ಮೈಯನ್ಮಾರಿನ ಕಲೆಗಳು ಪ್ರಭಾವ ಬೀರಿವೆ. ಲಾವೋಸ್ ಜನರಲ್ಲಿ ಕುಶಲಕಲೆಗಳು ಈಗಲೂ ಉಳಿದಿವೆ. ನೇಯ್ಗೆ, ಬುಟ್ಟಿ ಹೆಣೆಯುವುದು, ಮರ ಮತ್ತು ದಂತಗಳಲ್ಲಿ ಕೆತ್ತನೆ, ಬೆಳ್ಳಿ ಮತ್ತು ಚಿನ್ನದ ಆಭರಣಗಳು, ಕುಸುರಿ ಕೆತ್ತನೆ, ಜನಪದ ಹಾಡು ಹಾಗೂ ಸಾಂಪ್ರದಾಯಿಕ ನೃತ್ಯ ಪ್ರಚಾರದಲ್ಲಿವೆ. ವೃತ್ತಿನಿರತ ನರ್ತಕರು ಹಬ್ಬ-ಹರಿದಿನಗಳಲ್ಲಿ ಅಥವಾ ರಜಾದಿನಗಳಲ್ಲಿ ಊರೂರು ಸಂಚರಿಸಿ ಪ್ರದರ್ಶನ ನೀಡುತ್ತಾರೆ. ಹಿಂದು ಪುರಾಣ ಕಥಾವಸ್ತುಗಳನ್ನಾಧರಿಸಿದ ಹಾಡುಗಾರಿಕೆ ಮತ್ತು ಕುಣಿತ ಲಾವೋಸ್ ಜನರಲ್ಲಿ ರೂಢಿಯಲ್ಲಿವೆ.	
	(ಪಿ.ಎಮ್‍.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ